top of page

ನನ್ನ ಮೆಚ್ಚಿನ ಕನ್ನಡಿಗ : ಜಯಂತ ಕಾಯ್ಕಿಣಿ

ಪವನ್ ನಾಗರಾಜ್


(ಜಯಂತ ಕಾಯ್ಕಿಣಿ)


ಸ್ನೇಹಿತರಾದ ಜಯಂತ ಕಾಯ್ಕಿಣಿಯವರು ಬಹುಮುಖ ಪ್ರತಿಭೆಯುಳ್ಳವರು:

ಕನ್ನಡದ ಶ್ರೇಷ್ಟ ಕವಿಗಳಲ್ಲೊಬ್ಬರು, ಸಾರಸ್ವತಲೋಕದ ತಾರೆ, ಅತಿ ಯಶಸ್ಸಿನ ಸಿನಿ ಸಾಹಿತಿ, ಆಯಾಸವಿಲ್ಲದೆ ಅಚ್ಚುಕಟ್ಟಿನ ಕನಡದಲ್ಲಿ ಮಾತನಾಡಬಲ್ಲ ಮಾತಿನಮಲ್ಲ. ಹೀಗೆ ಹಲವಾರು ಆಯಾಮವಿರುವ ಜಯಂತರು ಒಬ್ಬ ದೈತ್ಯ ಪ್ರತಿಭೆ. ಮುಂಗಾರು ಮಳೆಯ ಹಾಡುಗಳ ಅಪ್ರತಿಮ ಯಶಸ್ಸಿನ ಹಿಂದೆ ಮನೋಮೂರ್ತಿ ಎಷ್ಟು ಕಾರಣಭೂತರೋ, ಜಯಂತರದೂ ಅಷ್ಟೇ ಕೊಡುಗೆ ಇದೆ. ಇನ್ನು ಅವರ ಬರವಣಿಗೆಗೆ ಬಂದರೆ, ಅವರ ಪದ್ಯದಷ್ಟೇ ಅವರ ಗದ್ಯ ಓದುವ ಅನುಭವ ಸುಖಕರವಾಗಿರುವುದು.

ಅವರು ಹುಟ್ಟಿ ಬೆಳೆದ ಊರು ಗೋಕರ್ಣ. ನಂತರ ಧಾರವಾಡದಲ್ಲಿ ಬಯೋಕೆಮಿಸ್ಟ್ರಿಯಲ್ಲಿ ಎಂಎಸ್ಸಿ ಪದವಿ. ತದನಂತರ ಮುಂಬೈ ಸೇರಿದ ಅವರು ಔಷಧಿ ಕಾರ್ಖಾನೆಯಲ್ಲಿ ಸುಮಾರು ಎರಡು ದಶಕ ಉದ್ಯೊಗ ಮಾಡಿದರು. ಮೊದಲು ಕವಿಯಾಗಿ ಕನ್ನಡಕ್ಕೆ ಪರಿಚಯಿಸಿ ಕೊಂಡರೂ, ಇವರು ಸಣ್ಣ ಕತೆಗಳಿಗೂ ತೊಡಗಿಸಿಕೊಂಡಿದ್ದಾರೆ.


ಕಥಾ ಸಂಗ್ರಹಗಳು:

  • ತೆರೆದಷ್ಟೇ ಬಾಗಿಲು

  • ಗಾಳ

  • ದಗಡೂ ಪರಬನ ಅಶ್ವಮೇಧ

  • ಅಮೃತಬಳ್ಳಿ ಕಷಾಯ (ಈ ಸಂಕಲನ ಇಂಗ್ಲಿಷ್ಗೆ ಭಾಷಾಂತರಗೊಂಡಿದೆ. ’ಡಾಟ್ಸ್ ಆಂಡ್ ಲೈನ್ಸ್’ ಎಂಬ ಹೆಸರಿನ ಸಂಗ್ರಹದಲ್ಲಿ ಪ್ರಕಟವಾಗಿದೆ. ಇವುಗಳಲ್ಲಿ ಒಂದು ಕಥೆಯನ್ನ ನಾನೇ ಭಾಷಾಂತರಿಸಿದ್ದೀನಿ)

  • ಬಣ್ಣದ ಕಾಲು


ಕವನ ಸಂಕಲನಗಳು:

  • ರಂಗದೊಂದಿಷ್ಟು ದೂರ

  • ಕೋಟಿ ತೀರ್ಥ

  • ಶ್ರಾವಣ ಮಧ್ಯಾಹ್ನ

  • ನೀಲಿ ಮಳೆ


ನಾಟಕಗಳು:

  • ಸೇವಂತಿ ಪ್ರಸಂಗ,

  • ಜತೆಗಿರುವನು ಚಂದಿರ


ಜಯಂತರು ಮತ್ತು ಅವರ ತಲೆಮಾರಿನ ಲೇಖಕರಾದ ಗುರುಪ್ರಸಾದ್ ಕಾಗಿನೆಲೆ, ಎಮ್ಎಸ್ ಶ್ರೀರಾಮ್, ವಿವೇಕ್ ಶಾನಬಾಗ್, ವಸುಧೇಂದ್ರ ಅವರುಗಳೊಂದಿಗೆ ವಿಪುಲವಾದ ಸಾಹಿತ್ಯ ವನ್ನು ಸೃಷ್ಟಿಸಿದ್ದಾರೆ.

ನಾನು ಅವರನ್ನ ಹತ್ತಿರದಿಂದ ನೋಡಿರುವುದರಿಂದ ಅವರ ಚಿಂತನೆ, ವ್ಯಕ್ತಿ-ವಿಷಯಗಳ ಬಗ್ಗೆ ಯೋಚಿಸುವ, ವಿಶ್ಲೇಸುವ ರೀತಿ ಸಾಹಿತ್ಯಾಸಕ್ತರಿಗೆ ಒಂದು ಹೊಸ ವಿಶ್ವವನ್ನೇ ತೆರೆದಿಡುತ್ತೆ ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ ಎಂದು ನಂಬಿದ್ದೀನಿ. ಅವರ ಕಲೆಯ ಸೂಕ್ಷ್ಮತೆ ಬಗ್ಗೆ ಹಿರಯ ಪತ್ರಕರ್ತ ಹಾಗು ಲೇಖಕ, ರವಿ ಬೆಳಗೆರೆ ಅವರು ಹೀಗೆ ಹೇಳಿದ್ದಾರೆ:

"ಜಯಂತ್ ಬಹು ದೊಡ್ಡ ಭಾವಜೀವಿ. ಶಂಖವನ್ನು ಕಿವಿಗೆ ಹಿಡಿದರೆ, ಅದರೊಳಗಿನ ಪುಟಾಣಿ ಹುಳುವಿನ ಹೃದಯಕ್ಕೆ ಕವಾಟಗಳೆಷ್ಟು ಎಂಬುದನ್ನು ಹೇಳಬಲ್ಲ ಸೂಕ್ಷ್ಮಕಲೆಗಾರ"


ನಿಜ. ಅವರ ಕಲೆಯ ಈ ಸೂಕ್ಷತೆ, ಅವರ ಮಾನವೀಯ ಮೌಲ್ಯಗಳು , ತಿಳಿಹಾಸ್ಯ ಮತ್ತು ಮುಖದ ಮೇಲಿನ ಆಕರ್ಶಕ ಮಂದಹಾಸ ಇವೆಲ್ಲದರಲ್ಲೂ ನೋಡಬಹುದು . ಈ ಕಾರಣಗಳಿಂದಲೇ ಅವರು ನನಗೆ ಪ್ರೀತಿಯ ಮಾರ್ಗದರ್ಶಕರಾಗಿದ್ದಾರೆ ಮತ್ತು ನನ್ನ ಮೆಚ್ಚಿನ ಕನ್ನಡಿಗರಾಗಿದ್ದಾರೆ!





Comments


Commenting has been turned off.
bottom of page