ಹಿತ್ತಲಿನ ಮದ್ದು
- nandikannadakoota
- Apr 13
- 2 min read

ಭಾರತಿ ಸಿದ್ದೇಗೌಡ
ಹಿತ್ತಲಿನ ಮದ್ದು ಮದ್ದಲ್ಲ ಅಂತ ತುಂಬಾ ಕೇಳಿದ್ದೆವೆ. ಹಿತ್ತಲಿನ ಮದ್ದೇ ನನ್ನ ಮತ್ತು ನನ್ನ ಮಕ್ಕಳ ಆರೋಗ್ಯ ಕಾಪಾಡಿದ್ದು ಮತ್ತು ಕಾಪಾಡುತ್ತಿರುವುದು. ಹಿತ್ತಲಿನ ಮದ್ದಿನಿಂದ ಯಾವುದೇ ಅಡ್ಡಪರಿಣಾಮವಿಲ್ಲ. ಜನರು ಗಿಡಮೂಲಿಕೆಗಳ ಅಮೂಲ್ಯವಾದ ಪ್ರಯೋಜನಗಳನ್ನು ಮರೆತಿದ್ದಾರೆ. ಈ ಲೇಖನದಲ್ಲಿ ಅದನ್ನು ನೆನಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಪ್ರಕೃತಿಯು ಸಾಕಷ್ಟು ಸಂಪನ್ಮೂಲಗಳನ್ನು ಕರುಣಿಸಿದೆ. ಇವುಗಳ ಸದುಪಯೋಗ ಪಡೆದುಕೊಳ್ಳುವುದು ಜಾಣತನ.
ತೋಟಗಾರಿಕೆ (Gardening)
ಹಸಿರೇ ಉಸಿರು ಎಂದು ಕೇಳಿದ್ದೆವೆ. ನನ್ನ ಅನುಭವದ ಪ್ರಕಾರ ತೋಟಗಾರಿಕೆ (Gardening) ಒಂದು ಉತ್ತಮ ಅವ್ಯಾಸ. ಇದರಿಂದ ತುಂಬಾ ಪ್ರಯೋಜನಗಳಿವೆ. ಅವುಗಳಲ್ಲಿ ಕೆಲವು; ನಿಮಗೂ ಮತ್ತು ನಿಮ್ಮ ನೆರೆವರೆಯವರಿಗೂ ಶುದ್ಧಗಾಳಿ, ಮನಸ್ಸಿಗೆ ಉಲ್ಲಾಸ, ಮಸಸ್ಸಿಗೆ ಆನಂದದಾಯಕ ಮತ್ತು ಕುತೂಹಲಕಾರಿ, ದೇಹಕ್ಕೆ ಉತ್ತಮ ವ್ಯಾಯಾಮ ಕೂಡ. ಪ್ರತಿದಿನ ನಾನು ಆಫೀಸಿನಿಂದ ಬಂದ ನಂತರ ಕುತೂಹಲದಿಂದ ಎಲ್ಲ ಗಿಡಗಳನ್ನು ವಿಕ್ಸಿಸುತ್ತೇನೆ, ಯಾವ ಸಸ್ಯದಲ್ಲಿ ಅಥವಾ ಮರದಲ್ಲಿ ಚಿಗುರು ಬಂದಿದೆ, ಮೊಗ್ಗು ಬರುತ್ತಿದೆ, ಹೂವು ಅರಳಿದೆ, ಹಣ್ಣು ಬಿಟ್ಟಿದೆ ಎಂದು. ಜೊತೆಯಲ್ಲಿ ನನಗೆ ಅರಿವಿಲ್ಲದೆ ಸಣ್ಣ ಪುಟ್ಟ ತೋಟಗಾರಿಕೆ ಕೆಲಸಗಳು ಸಾಗುತ್ತಿರುತ್ತವೆ. ರಾತ್ರಿ ಮತ್ತು ಬೆಳಿಗ್ಗೆಗೆ ಬೇಕಾಗುವ ಮದ್ದುಗಳನ್ನು ಹಿತ್ತಲಿನಿಂದ ತರುತ್ತೇನೆ. ಇದರಿಂದ ಪ್ರತಿನಿತ್ಯ ದೇಹಕ್ಕೆ ಬೇಕಾಗಿರುವ ವ್ಯಾಯಾಮ, ಶುದ್ಧಗಾಳಿ, ದಿನನಿತ್ಯದ ಕೆಲಸದಿಂದ ವಿರಾಮ ಮತ್ತು ಸಸ್ಯಮೂಲ ಔಷಧಿಗಳು ನನಗೆ ಉಚಿತವಾಗಿ ಸಿಗುತ್ತವೆ. ವಾರದ ಕೊನೆಯಲ್ಲಿ ತುಳಸಿ, ದೊಡ್ಡಪತ್ರೆ, ಲೆಮನ್ ಗ್ರಾಸ್, ಸಂಜೀವಿನಿ (ಲೀಫ್ ಒಫ್ ಲೈಫ್) ಎಲ್ಲೆಗಳನ್ನು ಸೆರಿಸಿ ಕಷಾಯ ಮಾಡಿ ಕುಟುಂಬದ ಎಲ್ಲ ಸದಶ್ಯರಿಗೆ ಕೊಡೊತ್ತೆನೆ. ಇದರಿಂದ ನಮ್ಮ ಎಲ್ಲರ ಆರೋಗ್ಯದಲ್ಲಿ ಸುಧಾರಣೆ ಕಂಡಿದಿದ್ದೇವೆ. ನಾನು ಯಾವುದೆ ಖರೀದಿಸಿದ ಔಷಧಿ ಇಲ್ಲದೆ ನನ್ನ ಆಮ್ಲೀಯತೆ (Acidity) ಮತ್ತು ಅಲರ್ಜಿ ಸಮಸ್ಯೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡ್ಡಿದ್ದೇನೆ.
ತುಳಸಿ (Holy Basil)
ತುಳಸಿ ಎಲೆ ಇಲ್ಲದೆ ಭಗವಂತ ವಿಷ್ಣುವಿನ ಪೂಜೆ ಪೂರ್ಣಗೊಳ್ಳದು. ಭಗವಂತನಿಗೆ ಇಷ್ಟೊಂದು ಪ್ರಿಯವಾದ ಎಲೆ ನಮಗೆ ಎಷ್ಟು ಉಪಯೋಗಕಾರಿಯಾಗಿರಬಹುದು ಯೋಚಿಸಿ. ತುಳಸಿ ಶೀತ, ಕೆಮ್ಮು ಮತ್ತು ಉಸಿರಾಟದ ಸೋಂಕುಗಳಿಗೆ ಅತ್ಯುತ್ತಮವಾದ ನೈಸರ್ಗಿಕ ಪರಿಹಾರ. ಪ್ರತಿದಿನ ಐದು ತಾಜಾ ತುಳಸಿ ಎಲೆಗಳನ್ನು ಅಗಿಯುವ ಮೂಲಕ ಸೇವಿಸಿ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ನೀವು ಕಾಣಬಹುದು. ನನ್ನ ಮಗ ಚಿಕ್ಕವನಿದ್ದಾಗ ಶೀತ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ತುಂಬಾ ಬಳಲುತ್ತಿದ್ದ. ನನ್ನ ಮಗಳಿಗೂ ಕೂಡ ನೆಗಡಿ ಸಮಸ್ಯೆ ಇತ್ತು. ಅತ್ತೆಯ ಸಲಹೆ ಮೇರೆಗೆ ಕಷಾಯ ಮತ್ತು ಸ್ನೇಹಿತ ಆನಂದ್ ಅವರ ಸಲಹೆ ಮೇರೆಗೆ ತುಳಸಿ ಎಲೆ ಕೊಡಲು ಪ್ರಾರಂಭಿಸಿದೆ. ಕೆಮ್ಮು ಪೂರ್ಣವಾಗಿ ವಾಸಿಯಾಗದಿದ್ದರು, ಸಾಕಷ್ಟು ಕಡಿಮೆಯಾಗಿದ್ದನ್ನು ನೋಡಿದ್ದೇನೆ. ಈಜು, ಕಷಾಯ ಮತ್ತು ಕಾರ್ಪೆಟ್ ತೆಗೆದು ಟೈಲ್ಸ್ ಹಾಕಿದ್ದು ಆರೋಗ್ಯವನ್ನು ನಿಧಾನವಾಗಿ ಕಾಪಾಡಿತು.
ಲೋಳೆಸರ (Aloe Vera)
ನನಗೆ ಅಲೋವೆರಾ ಆಮ್ಲೀಯತೆ(Acidity), ಅಲರ್ಜಿ(Allergy), ಹೊಸಡು ನೋವು, ತಲೆಹೊಟ್ಟು ಮತ್ತು ಮುಖದ ಮೇಲಿನ ಮೊಡವೆ ಮತ್ತು ಗುರುತುಗಳನ್ನು ಹೋಗಲಾಡಿಸಲು ನೆರವು ಮಾಡಿದೆ. ನಾನು ಪ್ರತಿದಿನ ಒಂದು ಇಂಚು ಅಲೋವೆರಾವನ್ನು ಬೆಳಗ್ಗೆ ಮತ್ತು ರಾತ್ರಿ ತಿನ್ನುತ್ತೇನೆ ಮತ್ತು ಮುಖಕ್ಕೆ ಹಚ್ಚುತ್ತೇನೆ. ನಾಟಿ ಗಿಡವಾದ್ದರಿಂದ ಕಹಿ ಇಲ್ಲ. ಕೆಲವು ದಿನ ಅಭ್ಯಾಸ ಮಾಡಿದರೆ ಸೌತೆಕಾಯಿ ತಿನ್ನುವ ರೀತಿಯಲ್ಲಿ ತಿನ್ನಬವುದು. ನನಗೆ ಇದನ್ನು ಶಿವ ವಿಷ್ಣು ದೇವಸ್ತಾನದ ಪೂಜಾರರು ಆಮ್ಲೀಯತೆ ಸಮಸ್ಯೆಗೆ ಪರಿಹಾರವಾಗಿ ಸೂಚಿಸಿದರು. ಆದರೆ ಇದು ದೇವರಕೃಪೆಯಿಂದ ೧೦ ವರ್ಷಗಳಿಂದ ಅಲರ್ಜಿ ಸಮಸ್ಯೆಗೆ ಪರಿಹಾರವಿಲ್ಲದೆ ಬಳಲುತ್ತಿದ್ದ ನನಗೆ ರಾಮಬಾಣವಾಗಿ ಪರಿಣಮಿಸಿತು. ಎಷ್ಟುಬಾರಿ ಕೃತಜ್ಞತೆ ಸಲ್ಲಿಸಿದೆನೊ ನನಗೆ ನೆನಪಿಲ್ಲ. ಲೋಳೆಸರವೆ ನನ್ನ ಮುಖ್ಯ ವೈದ್ಯ. ಅದಕ್ಕೆ ನನ್ನ ಕೋಟಿ ಕೋಟಿ ಧನ್ಯವಾದ.
ದೊಡ್ಡಪತ್ರೆ (Oregano / Mexican Mint)
ಅಲೋವೆರಾ ತಿನ್ನುವುದರಿಂದ ಆಮ್ಲೀಯತೆ (Acidity) ಕಡಿಮೆ ಆಗಿತ್ತು, ಜೊತೆಯಲ್ಲಿ ಪಥ್ಯ (diet) ಮಾಡಬೇಕಿತ್ತು. ಟಿವಿಯಲ್ಲಿ ಆಯುರ್ವೇಧ ತಜ್ಞರು ದೊಡ್ಡಪತ್ರೆ ತಿನ್ನುವುದರಿಂದ ಆಮ್ಲೀಯತೆ ನಿಯಂತ್ರಿಸಬವುದು ಎಂದು ಹೇಳಿದರು. ನಾನು ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಎರಡು ಎಲೆಗಳನ್ನು ತಿನ್ನಲು ಪ್ರಾರಂಭಿಸಿದೆ. ಈಗ ಯಾವುದೆ ಅಲೋಪಥಿಕ್ ಔಷದಿ ಇಲ್ಲದೆ ಆಮ್ಲೀಯತೆ ನಿತಂತ್ರಣದಲ್ಲಿದೆ. ವಿಟಮಿನ್ ಎ, ಸಿ, ಇ ಮತ್ತು ಕೆ, ಜೊತೆಗೆ ಕಬ್ಬಿಣ ಮತ್ತು ಕ್ಯಾಲ್ಸಿಯಂನಿಂದ ತುಂಬಿರುವ ಇದು ರೋಗನಿರೋಧಕವಾಗಿ ಆರೋಗ್ಯವನ್ನು ಕರುಣಿಸುತ್ತದೆ.
ವೀಳ್ಯದೆಲೆ (Betel leaves)
ಸ್ನೇಹಿತ ಚಂದ್ರ ಅವರ ಸಲಹೆ ಮೇರೆಗೆ ನಾನು ಮತ್ತು ನನ್ನ ಪತಿ ಶಿವ ಎರಡು ಖಾಲಿ ವೀಳ್ಯದೆಲೆ ತಿನ್ನಲು ಪ್ರಾರಂಭಿಸಿದೆವು. ಕೆಲವು ತಿಂಗಳ ನಂತರ ನನ್ನ ಗುಡ್ ಕೊಲೆಸ್ಟ್ರಾಯ್ಲ್ ಹೆಚ್ಚಾಗಿರುವುದು ಮತ್ತು ಶಿವ ಅವರ ಬ್ಯಾಡ್ ಕೊಲೆಸ್ಟ್ರಾಯ್ಲ್ ಕಡಿಮೆಯಾಗಿರುವುದು ರಕ್ತ ಪರೀಕ್ಷೆಯಲ್ಲಿ ತಿಳಿಯಿತು. ವೀಳ್ಯದೆಲೆಗಳು ಹೆಚ್ಚು ಪೌಷ್ಟಿಕವಾಗಿದ್ದು, ವಿಟಮಿನ್ ಸಿ, ಎ ಮತ್ತು ಬಿ ಗಳಿಂದ ತುಂಬಿವೆ. ಜೊತೆಗೆ ಕ್ಯಾಲ್ಸಿಯಂ, ಕಬ್ಬಿಣ, ಅಯೋಡಿನ್ ಮತ್ತು ಪೊಟ್ಯಾಸಿಯಮ್‌ಗಳು ಇವೆ.
ಎಲ್ಲರೂ ತೋಟಗಾರಿಕೆಯನ್ನು ಪ್ರಾರಂಭಿಸಲು ನಾನು ಪ್ರೋತ್ಸಾಹಿಸುತ್ತೇನೆ. ಇದು ನಮ್ಮ ಆರೋಗ್ಯವನ್ನು ಸುಧಾರಿಸಲು ಮತ್ತು ಹೆಚ್ಚಿಸಲು ಸರಳವಾದ ಮಾರ್ಗ. ನಾನು ಮೇಲೆ ಹೇಳಿದ ಸಸ್ಯಗಳನ್ನು ಬೆಳೆಸಲು ಜಾಗವಿಲ್ಲದಿದ್ದರೆ ದೊಡ್ಡ ಮಡಿಕೆಗಳಲ್ಲಿ (pots) ಬೆಳಸಿ. ಮುಂಜಾನೆ ಎದ್ದು ನೀರು ಕುಡಿದ ನಂತರ ಖಾಲಿ ಹೊಟ್ಟೆಗೆ ಈ ತಾಜಾ ಎಲೆಗಳನ್ನು ತಿಂದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ರಾತ್ರಿ ಊಟ ಮುಗಿಸಿ ನೀರು ಕುಡಿದ ನಂತರ ಮತ್ತೆ ತಿನ್ನಿರಿ. ವಾರಾಂತ್ಯದಲ್ಲಿ ಗಿಡಮೂಲಿಕೆ ಪಾನೀಯ (ಕಶಾಯ) ತಯಾರಿಸಿ ಕುಡಿಯಿರಿ. ನಿಮ್ಮ ಆರೋಗ್ಯವನ್ನು ನೈಸರ್ಗಿಕವಾಗಿ ಮತ್ತು ಉಚಿತವಾಗಿ ಹೆಚ್ಚಿಸಿಕೊಳ್ಳಿ. ನಾನು ಇದನ್ನು ಅನುಭವಿಸಿ ನಿಮಗೆ ಹೇಳುತಿದ್ದೇನೆ. ಈ ಒಂದು ಸಣ್ಣ ಪ್ರಯತ್ನವು ಆರೋಗ್ಯಕರ, ಸಂತೋಷದ ನಾಳೆಗೆ ಕಾರಣವಾಗಬಹುದು!









Comments